ಬಿಬ್ಬಿಬಾಚಯ್ಯ
ಬಿಬ್ಬಿಬಾಚಯ್ಯ : -  ೧೨ನೆಯ ಶತಮಾನದಲ್ಲಿದ್ದ ಶಿವಶರಣ ಹಾಗೂ ವಚನಕಾರ. ಗುಲ್ಬರ್ಗ ಜಿಲ್ಲೆಯ ಗೊಬ್ಬೂರು ಈತನ ಜನ್ಮಸ್ಥಳ. ಬ್ರಾಹ್ಮಣ ಕುಲದಲ್ಲಿ ಜನಿಸಿದ ಈತ ಅನಂತರ ಶಿವದೀಕ್ಷೆ ಪಡೆದು ಶೈವನಾದ. ಇವನಿಗೆ ಬಿಬ್ಬ ಬಾಚಯ್ಯ ಗೊಬ್ಬೂರು ಬಾಚಯ್ಯ, ಬಾಚರಸ ಎಂಬ ಹೆಸರುಗಳೂ ಇವೆ. ಈತ ಶಿವಶರಣರ ಮನೆಯಲ್ಲಿ ಉಂಡು ಉಳಿದದ್ದನ್ನು ಪ್ರಸಾದವೆಂದು ತಂದು ಜಂಗಮ ದಾಸೋಹ ನಡೆಸುತ್ತಿದ್ದ. ಒಮ್ಮೆ ಈತ ತಂದ ಪ್ರಸಾದವನ್ನು ನೋಡಿದ ಬ್ರಾಹ್ಮಣರು ಅದು ಪ್ರಸಾದವಲ್ಲ ಎಂಜಲೆಂದು ಹೇಳಿ ಈತನನ್ನು ಊರ ಒಳಕ್ಕೆ ಸೇರಿಸಲಿಲ್ಲ. ಕೋಪಗೊಂಡ ಈತ ಆ ಪ್ರಸಾದವನ್ನು ಅಲ್ಲಿಯೇ ಚೆಲ್ಲಿ ಊರನ್ನೇ ಸುಟ್ಟುಹಾಕಿದ. ಅನಂತರ ತಮ್ಮನ್ನು ರಕ್ಷಿಸೆಂದು ಬ್ರಾಹ್ಮಣರು ಶರಣು ಬಂದಾಗ ಬಿಬ್ಬಿಬಾಚಯ್ಯ ಊರನ್ನು ರಕ್ಷಿಸಿದ ಎಂಬ ವಿಚಾರ ಈತ ಮೆರೆದ ಪವಾಡಗಳಲ್ಲಿ ಒಂದು. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣದಲ್ಲಿ ಪ್ರಸಾದುಲು ಬಿಬ್ಬ ಬಾಚಯ್ಯಗಾರು (ಪ್ರಸಾದಿ ಬಿಬ್ಬಿಬಾಚಯ್ಯ) ಎಂಬ ಉಲ್ಲೇಖವಿದೆ. ಲಕ್ಕಣ್ಣ ದಂಡೇಶ, ಗುಬ್ಬಿಯ ಮಲ್ಲಣಾರ್ಯ, ನಂಜುಂಡ ಮೊದಲಾದವರು ತಮ್ಮ ಕಾವ್ಯಗಳಲ್ಲಿ ಈತನ ಹೆಸರನ್ನೂ ಈತನ ಪ್ರಸಾದ ಮಹಿಮೆಯನ್ನೂ ಕೊಂಡಾಡಿದ್ದಾರೆ. ಚೆನ್ನಬಸವಣ್ಣ ಈತನನ್ನು ಪ್ರಸಾದ ಪ್ರಸಾದಿ ಬಿಬ್ಬಿಬಾಚಯ್ಯ ಎಂದು ಹೊಗಳಿದ್ದಾನೆ.

ಈತ ಏಣಾಂಕಧರ ಸೋಮೇಶ್ವರಲಿಂಗ ಎಂಬ ಅಂಕಿತವನ್ನಿಟ್ಟುಕೊಂಡು ವಚನಗಳನ್ನು ಬರಿದಿದ್ದಾನೆ. ಇದುವರೆಗೆ 100 ವಚನಗಳು ದೊರೆತಿವೆ. ಇವುಗಳಲ್ಲಿ ಬೆಡಗಿನ ವಚನಗಳೂ ಸೇರಿವೆ. ಈತನ ವಚನಗಳಲ್ಲಿ ಉತ್ತಮ ರೀತಿಯ ತತ್ತ್ವ ನಿರ್ದೇಶನವಿದೆ. ಹೇಳುವ ಮಾತುಗಳನ್ನು ಹಲವಾರು ಉಪಮೆಗಳ ಮೂಲಕ ಮನಮುಟ್ಟುವಂತೆ ಹೇಳಿರುವುದು ಕಂಡುಬರುತ್ತದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ